ಜೀವಿಪಂಕ -
	ಆಳವಾದ ಸಾಗರತಳದಲ್ಲಿ ದೊರೆಯುವ, ಅಸಂಖ್ಯ ಅತಿಸೂಕ್ಷ್ಮ ಜೀವಿಗಳ ಚಿಪ್ಪು ಹಾಗೂ ಇತರ ಭಾಗಗಳಿಂದ ರಚಿತವಾದ ಮಿದು ಮತ್ತು ಲೋಳೆಯುಕ್ತವಾದ ಕೆಸರುಮಣ್ಣು (ಊeóï). ಕೆಂಪುಮಣ್ಣು ಕೂಡ ಆಳವಾದ ಸಾಗರ ನಿಕ್ಷೇಪವೇ. ಆದರೆ ಇದರಲ್ಲಿ ಕೇವಲ ನಿರ್ಜೀವ (ಖನಿಜ) ವಸ್ತುಗಳು ಮಾತ್ರ ಇದ್ದರೆ ಆಗ ಇದು ಜೀವಿಪಂಕ ಎನ್ನಿಸುವುದಿಲ್ಲ. ಜೀವಿಪಂಕ ನಿಕ್ಷೇಪವನ್ನು ಅದರಲ್ಲಿ ಇರುವ ಜೀವ್ಯವಶೇಷದ ಆಧಿಕ್ಯವನ್ನು ಅನುಸರಿಸಿ ನಾಮಕರಿಸಲಾಗುವುದು. ಉದಾಹರಣೆಗೆ ಗ್ಲೋಬಿಜರೈನ ಜೀವಿಪಂಕ, ಟೀರೋಪಾಡ್ ಜೀವಿಪಂಕ, ರೇಡಿಯೋಲೇರಿಯನ್ ಜೀವಿಪಂಕ ಮತ್ತು ಡೈಆ್ಯಟಮ್ ಜೀವಿಪಂಕ-ಇವು ಜೀವಿಪಂಕಗಳಲ್ಲಿ ಕಂಡುಬರುವ ಮುಖ್ಯ ಜಾತಿಗಳು.

	ಸೂಕ್ಷ್ಮದರ್ಶಕಕ್ಕೆ ಮಾತ್ರ ಗೋಚರವಾಗುವ ಬಹು ಸೂಕ್ಷ್ಮಜೀವಿಗಳು (ಸಸ್ಯಗಳೂ ಜಂತುಗಳೂ) ಸಾಗರದ ತಳದಲ್ಲೂ ಮೇಲೂ ವಾಸಿಸುತ್ತಿರುವುವು. ಇವು ಕಡಲ ನೀರಿನಲ್ಲಿರುವ ಸುಣ್ಣ (ಸುಧಾ) ಮತ್ತು ಸಿಕತವನ್ನು (ಬೆಣಚು, Sio2) ಹೀರಿ ಕಠಿಣವಾದ ಅಂಗಗಳನ್ನು ನಿರ್ಮಿಸಿಕೊಳ್ಳುತ್ತವೆ. ಇವು ಸತ್ತುಹೋದ ಬಳಿಕ ಇವುಗಳ ಕಳೇಬರಗಳು ಕೆಳಕ್ಕೆ ಇಳಿಯುತ್ತ ಹೋಗುತ್ತವೆ. ಮೃದು ಭಾಗಗಳು ಕೊಳೆತು ಹೋಗುತ್ತವೆ, ಗಟ್ಟಿ ಭಾಗಗಳು ಸಾಗರತಳದ ಮೇಲೆ ನಿಧಾನವಾಗಿ ಶೇಖರವಾಗುತ್ತವೆ. ಇವುಗಳೊಡನೆ ಗಾಳಿಯಲ್ಲಿ ತೂರಿ ಬಂದ ಜ್ವಾಲಾಮುಖಿಯ ದೂಳು ಸೇರಿರುತ್ತವೆ. 0.4" ಎತ್ತರವಿರುವ ಗ್ಲೋಬಿಜರೈನ ಪಂಕದ ಪದರವಾಗಲು 1,300 ವರ್ಷಗಳು ಬೇಕು. (ಆದರೆ ಖಂಡಗಳ ತೀರದಲ್ಲಿ ಬಹುಬೇಗ ಪೆಂಟೆಕಲ್ಲು, ಮರಳುಕಲ್ಲು ಮೊದಲಾದವು ಶೇಖರವಾಗುತ್ತವೆ.).

	ಸುಧಾಮಯ ಜೀವಿಪಂಕಗಳು ಸಾಮಾನ್ಯವಾಗಿ 4,500-5,000 ಮೀಟರ್ ಆಳದ ಒಳಗೆ ಹರಡಿವೆ. ಗ್ಲೋಬಿಜರೈನ ಜೀವಿಪಂಕ ಅಟ್ಲಾಂಟಿಕ್, ಪೆಸಿಫಿಕ್ ಮತ್ತು ಹಿಂದೂ ಸಾಗರದ ವಿಶಾಲ ಭಾಗಗಳಲ್ಲಿ ಹರಡಿದೆ. ಆಫ್ರಿಕ ಖಂಡದ ಸಮಭಾಜಕವೃತ್ತದ ಬಳಿ ಇದರ ಉತ್ಪತ್ತಿಯ ವೇಗ 1,000 ವರ್ಷಕ್ಕೆ 1.6ಸೆಂಮೀ ಎಂದು ಈಚೆಗೆ ವರದಿ ಮಾಡಿದ್ದಾರೆ. ಟೀರೋಪಾಡ್ ಎಂಬ ಮೃದ್ವಂಗಿ (ಇದು ತಿಮಿಗೆ ಆಹಾರ) ದಕ್ಷಿಣ ಆಫ್ರಿಕ ಮತ್ತು ದಕ್ಷಿಣ ಅಮೆರಿಕ ಖಂಡದ ನಡುವೆ ಇರುವ ಅಟ್ಲಾಂಟಿಕ್ ಸಾಗರದಲ್ಲಿ ಕೇಂದ್ರಿಕೃತವಾಗಿದೆ. ಅದರ ತಳದಲ್ಲಿ ಇದರ ಪಂಕ ವಿಶೇಷವಾಗಿದೆ.

	ಸಿಕತಮಯ ಜೀವಿಪಂಕಗಳಲ್ಲಿ ರೇಡಿಯೋಲೇರಿಯನ್ ಜೀವಿಪಂಕ ಭೂಮಧ್ಯವಲಯಕ್ಕೆ ಉತ್ತರದಲ್ಲಿ ಪೆಸಿಫಿಕ್ ಸಾಗರದಲ್ಲಿ ಹೇರಳವಾಗಿದೆ. ರೇಡಿಯೋಲೇರಿಯ ಎಂಬ ಅತಿಸೂಕ್ಷ್ಮವಾದ ಕೀಳುದರ್ಜೆಯ ಜಂತುವಿನ ಅವಶೇಷಗಳೊಡನೆ ಸ್ಪಂಜಿನ ಅವಶೇಷಗಳೂ ಇದರಲ್ಲಿವೆ.

	ಸಾಗರದ ಮೇಲು ಭಾಗದಲ್ಲಿ ಹುಲುಸಾಗಿ ಬೆಳೆಯುವ ಕೀಳು ದರ್ಜೆಯ ಸಸ್ಯವರ್ಗಕ್ಕೆ ಸೇರಿದ, ಡೈಯಾಟಮ್ ಎಂಬ ಕಡಲಹುಲ್ಲಿನ ಅವಶೇಷಗಳಿಂದ ಕೂಡಿದ ಡೈಯಾಟಮ್ ಜೀವಿಪಂಕ ಉತ್ತರ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರದ ಶೀತಲಪ್ರದೇಶಗಳಲ್ಲಿ ವಿಶೇಷವಾಗಿ ಸಿಕ್ಕುತ್ತದೆ.
(ಎ.ಎನ್.ಎಸ್.ಐ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ